₹140
Ex Tax: ₹140
ಶಾಂತಿ ಅಪ್ಪಣ್ಣ ಅವರ ಕಥಾಸಂಕಲನ ...ಮನಸು ಅಭಿಸಾರಿಕೆ...ಯ ಕತೆಗಳು ಇಂಚುಪಟ್ಟಿಗಳಾಚೆ ನಿಂತು ಖುಷಿ ಕೊಡುವಂತಿವೆ. ಶಾಂತಿ ಹೊಸ ತಲೆಮಾರಿನ ಕತೆಗಾರ್ತಿ. ಕನ್ನಡದಲ್ಲಿ ಕತೆಗಾರ್ತಿಯರ ಸಂಖ್ಯೆ ವಿರಳವಾಗುತ್ತಿರುವ ಸಮಯದಲ್ಲಿ ಹಾಗೂ ಹೊಸ ಮಾತಿನಲ್ಲಿ ಬರೆಯಬಲ್ಲ ಕತೆಗಳಿಗಾಗಿ ಕಾಯುತ್ತಿರುವ ಹೊತ್ತಲ್ಲಿ ಸಂಕಲನದ ಸಣ್ಣಕತೆಗಳು ಚಾರಿತ್ರಿಕವಾಗಿ ಹೇಗೆ ನೋಡಿದರೂ ಮುಖ್ಯವೆನ್ನುವಂತೆ ಕಾಣುತ್ತದೆ.ಅತಿ ಬೌದ್ಧಿಕತೆಯ ಕೃತಕ ಪರಿಸರ, ಸುಗಮಗೊಳಿಸಿಕೊಂಡ ಸುರಳೀತ ಹಾದಿಗಳು ಸೃಜನಶೀಲತೆಯ ಪ್ರಶ್ನೆಯನ್ನು ಎರಡು ಅತಿಗಳಿಗೆ ದೂಡುತ್ತಿವೆ. ಈ ಹೊತ್ತಲ್ಲಿ ಸಹಜವಾಗಿ ತನ್ನಿಂತಾನೆ ಕವಿತೆಯಾಗುವ, ಕತೆಯಾಗುವ ಕ್ರಿಯೆಯನ್ನು ಈ ಕತೆಗಾರ್ತಿ ಮೈಗೂಡಿಸಿಕೊಂಡಿದ್ದಾರೆ. ಶಾಂತಿ ಅವರ ಕತೆಗಳು ದೂರನಿಂತು ಬದಲಾಗುತ್ತಿರುವ ಸಮಾಜವನ್ನು ನೋಡುತ್ತಿರುವ ಜಾತಿಯವಲ್ಲ. ಅತಿ ತಂತ್ರಗಳ ಬಳಕೆಯಿಂದಲೂ ಅವು ದೂರ. ಅವರ ಕತೆಗಳು ನಡೆಯುವುದು ಹಳ್ಳಿ ಮತ್ತು ನಗರಗಳು ಕಲೆಸಿದ, ಮಹಾ ಆಧುನಿಕತೆಯನ್ನು ಎದುರಿಸುತ್ತಿದ್ದೇವೆಂಬ ಭ್ರಮೆಯ ಜನರ ನಡುವೆ ಕಾಣುವ ವಾಸ್ತವಗಳಲ್ಲಿ. ಆಧುನಿಕೋತ್ತರ ಸಮಾಜಗಳ ಸಾಮಾಜೀಕರಣ ಎಂದು ಇವನ್ನು ಕರೆಯಬಹುದಾದರೆ – ಹೌದು, ಇವು ಆಧುನಿಕತೆಯನ್ನು ಹೊಸ ರೀತಿಯಲ್ಲಿ ಕಂಡುಕೊಂಡ ಸಂವೇದನೆ.ಹಳ್ಳಿಗಳು ಕನ್ಯಾದಾರಿಗಳಾಗಿ ಉಳಿಯದ ದಿನಮಾನವು ಸ್ವರ್ಗಗಳ ಹುಸಿತನಕ್ಕೆ ಸೋತು ಹೋಗುವಾಗ ನಡೆಯುವ ಸಂಚಲನವನ್ನು ಇಂದು ಅನಿವಾರ್ಯವಾಗಿ ಸ್ವೀಕರಿಸಲೇಬೇಕಿದೆ. ಅವರ ಕತೆಗಳು ಹಿಡಿಯುವುದು ಇಂತಹ ಸಂವೇದನೆಯನ್ನು. ವಲಸೆಯ ತ್ರಿಶಂಕುಗಳು ಬಾಳುತ್ತಿರುವ ಬಾಳುಗಳನ್ನು ಕತೆಗಾರ್ತಿ ನೋಡುತ್ತಾರೆ. ಪಲ್ಲಟವನ್ನು ಹಳಹಳಿಕೆಯಿಂದ ನೋಡದೆ ದುರಂತವನ್ನು ಕಣ್ಣುಬಿಟ್ಟು ನೋಡುವುದು ಅವರ ಗುಣ ಎನ್ನಬಹುದು. ಸಾಮಾಜಿಕತೆಯ ಗುರಿಯನ್ನು ಇಟ್ಟುಕೊಳ್ಳದೆ ಬರೆಯುವ ಶಾಂತಿ ಅವರ ಕತೆಗಳಲ್ಲಿ ಪ್ರೇಮದ ಹಾಜರಿ ಇದ್ದೇ ಇದೆ. ಆದರೆ ಆ ಪ್ರೇಮವಾದರೋ ಶುದ್ಧವಾದ ಭಾವವಲ್ಲ. ಚೀಪ್ ಆದ ಪ್ರಣಯಗಳ ಚಹರೆಯ ನಡುವೆಯೇ ಉಸಿರಾಡುತ್ತ ತನ್ನ ಆಂತರ್ಯದ ಸೌಂದರ್ಯವನ್ನು ಕಾಪಾಡಿಕೊಳ್ಳುವ ತುಡಿತ ಅದಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಖಾಸಗಿತನವನ್ನು ಇಲ್ಲವಾಗಿಸುವ ವಾಸ್ತವದಲ್ಲಿ ಪ್ರೀತಿಯ ಸಂವೇದನೆಯನ್ನು ಇಡುವುದು ಕೊಂಚ ಕಷ್ಟವೇ. ಆದರೆ ಅದನ್ನು ನಿಭಾಯಿಸುವ ಆತ್ಮವಿಶ್ವಾಸದ ಯೌವನ ಇಲ್ಲಿದೆ.ಈ ಸಂಕಲನದ ‘ಪಾಸಿಂಗ್ ಕ್ಲೌಡ್ಸ್’ ಕತೆ ಜೀವನವನ್ನು ಡಾಕ್ಯುಮೆಂಟರಿಯಾಗಿಸುವ ರಿಯಾಲಿಟಿಯಲ್ಲಿ ಕಾಮ–ಪ್ರೇಮದ ಸಂಬಂಧಗಳನ್ನು ನೋಡಿದರೆ, ‘ಮುಳ್ಳುಗಳು’ ಕತೆಗಳು ಹೊಸ ನಗರಗಳಿಗೆ ಬೇಕಾದ ಕೂಲಿಗಳ ಅರಸುವಿಕೆಯಲ್ಲಿರುವ ಬಿಲ್ಡರ್ಸ್ ಮಾಫಿಯಾ ನುಂಗುವ ಟಿಪ್ಪು ಸಂಸಾರಗಳಂತಹವನ್ನು ಬಿಚ್ಚಿಡುತ್ತದೆ.ಇದರ ನಡುವೆ ನಗರೀಕರಣದಲ್ಲಿ ಮತ್ತೆ ವಿವರಿಸಿಕೊಳ್ಳಬೇಕಾದ ಜಾತಿಯ ಸಂಗತಿಯೂ ಭುಗಿಲೇಳುತ್ತದೆ. ದೇವರು ಬರುವ ಪರಮನು ಕೆಣಕುವ ಜಾತಿ ಪ್ರಶ್ನೆ ಹೊಸ ಪಾತಳಿಯಲ್ಲಿರುವ ಹಳೆಯ ಹುಣ್ಣು. ರಾಜಕೀಯ ಅಸ್ಮಿತೆಗಳೇ ಮುಖ್ಯವಾದ ಸಮುದಾಯಗಳಲ್ಲಿ ಮನುಷ್ಯನ ಒಂಟಿತನ ಹೊಳೆಯುತ್ತದೆ. ಸಣ್ಣಕತೆಯು ಹಿಡಿಯಬಹುದಾದ ಇಂತಹ ವಿಷಾದಗಳನ್ನು ಅವರ ಕತೆಗಳು ದಾಖಲಿಸಿವೆ. ಕತೆಗಳು ಅನೇಕ ಒಳದನಿಗಳನ್ನೂ ಕೆಳದನಿಗಳನ್ನೂ ರೂಢಿಸಿಕೊಂಡಿವೆ.ಅವುಗಳಲ್ಲಿ ಅಬ್ಬರವಿಲ್ಲ. ಕಿರುಚಿ ಹೇಳುವ ಸತ್ಯಗಳಾಗಲಿ, ವಕೀಲಿಕೆ ಮಾಡುವ ಶೈಲಿಯಾಗಲೀ ಅವರ ಕತೆಗಳಲ್ಲಿ ಗೈರುಹಾಜರಾಗಿದೆ. ಸಣ್ಣದೊಂದು ಕುತೂಹಲ ಹುಟ್ಟಿಸಬಲ್ಲ ಅವರ ಕತೆಗಳು ಓದುಗರಿಗೆ ಆಪ್ತವಾಗುತ್ತವೆ...
Add to Cart